ಕರ್ನಾಟಕ ಸರ್ಕಾರವು ಇತ್ತೀಚಿಗೆ ಮಹಿಳೆಯರ ಹಿತಾಸಕ್ತಿಗೆ ಅನುಗುಣವಾಗಿ ಜಾರಿಗೆ ತಂದಿರುವ ನೂತನ ಯೋಜನೆಗಳನ್ನು ಇಲ್ಲಿ ಪರಿಚಯಿಸುವ ಪ್ರಯತ್ನ ನಡೆದಿದೆ.
ಶುಚಿ ಯೋಜನೆ
ಶುಚಿ ಯೋಜನೆಯಡಿ 10 ರಿಂದ 18 ವಯೋಮಾನದ 19 ಲಕ್ಷದ 27 ಸಾವಿರ ವಿದ್ಯಾರ್ಥಿನಿಯರಿಗೆ ಉಚಿತ ಸ್ಯಾನಿಟರಿ ಪ್ಯಾಡ್ ಹಂಚಿಕೆ ಮಾಡಲು ಪ್ರಸಕ್ತ ಸಾಲಿನಲ್ಲಿ ರೂ. 47 ಕೋಟಿ ಅನುದಾನ ನೀಡಿದ್ದು, ವೈಯಕ್ತಿಕ ಸ್ವಚ್ಚತೆಯ ಮೂಲಕ ದೈಹಿಕ ಆರೋಗ್ಯ ವೃದ್ಧಿಸಿ, ಶೈಕ್ಷಣಿಕ ಸಾಧನೆಗೆ ಈ ಯೋಜನೆಯು ನೆರವಾಗಲಿದೆ.
ಸ್ತ್ರೀ ಸುರಕ್ಷೆ
ನಾಡಿನ ಮಹಿಳೆಯರು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ವಲಯದಲ್ಲಿ ಮುಕ್ತವಾಗಿ ಭಾಗವಹಿಸುವ ಅವಕಾಶ ಮತ್ತು ಸುರಕ್ಷಿತ ವಾತಾವರಣವನ್ನು ಒದಗಿಸಲು ನಮ್ಮ ಸರ್ಕಾರವು ಬದ್ಧವಾಗಿದೆ. ಮಹಿಳೆಯರ ಸುರಕ್ಷತೆಗಾಗಿ 6 ನೂತನ ಮಹಿಳಾ ಪೊಲೀಸ್ ಠಾಣೆಗಳನ್ನು ಸ್ಥಾಪಿಸುವ ಮತ್ತು ಆಸಿಡ್ ದಾಳಿ ಸಂತ್ರಸ್ತ ಮಹಿಳೆಯರಿಗೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ ಸ್ವಯಂ ಉದ್ಯೋಗ ಕೈಗೊಳ್ಳಲು ರೂ. 5 ಲಕ್ಷದ ವರೆಗೆ ಬಡ್ಡಿ ರಹಿತ ಸಾಲ ಸೌಲಭ್ಯ ಹಾಗೂ ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ವಸತಿ ಸೌಲಭ್ಯ ಕಲ್ಪಿಸುವುದಾಗಿ ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಘೋಷಿಸಿ, ಮಹಿಳಾ ಕಲ್ಯಾಣ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿಲಾಗಿದೆ ಎಂದು ತಿಳಿಸಿದ್ದಾರೆ.
ಹೊಸ ಬಸ್ ಖರೀದಿ
ಶಕ್ತಿ ಯೋಜನೆಯಿಂದ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಪ್ರಯಾಣಿಕರ ಸಂಖ್ಯೆ ಶೇ. 15 ರಷ್ಟು ಹೆಚ್ಚಾಗಿದೆ. ಹೆಚ್ಚುವರಿ ಶೆಡ್ಯೂಲ್ ಗಳನ್ನು ಸೇರಿಸಲು ಹಾಗೂ ಪ್ರಯಾಣಿಕರಿಗೆ ಉತ್ತಮ ಸೇವೆ ಒದಗಿಸಲು ಬಸ್ಗಳ ಸಂಖ್ಯೆಯನ್ನು ಹೆಚ್ಚಿಸುವ ಅಗತ್ಯವಿದೆ. ಈ ಉದ್ದೇಶದಿಂದ ಪ್ರಸಕ್ತ ಆಯವ್ಯಯದಲ್ಲಿ ಹೊಸ ಬಸ್ಗಳ ಖರೀದಿಗೆ 500 ಕೋಟಿ ರೂ. ಒದಗಿಸಲಾಗಿದ್ದು 5,675 ಹೊಸ ಬಸ್ ಖರೀದಿಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು.
ಮನಸ್ವಿನಿ
40 ವರ್ಷದಿಂದ 64 ವರ್ಷದೊಳಗಿನ ವಿಚ್ಚೇದಿತ ಮತ್ತು ಅವಿವಾಹಿತ ಮಹಿಳೆಯರ ಸ್ವಾವಲಂಬಿ ಬದುಕಿಗೆ ಬೆಂಬಲವಾಗಿ ನಿಲ್ಲಬೇಕೆಂಬ ಉದ್ದೇಶದೊಂದಿಗೆ 2013ರಲ್ಲಿ ನಮ್ಮ ಸರ್ಕಾರವು ಮನಸ್ವಿನಿ ಯೋಜನೆಯನ್ನು ಜಾರಿಗೆ ತಂದಿತ್ತು. ಬಡತನರೇಖೆಗಿಂತ ಕೆಳಗಿರುವ ವಿಚ್ಚೇದಿತ ಮತ್ತು ಅವಿವಾಹಿತ ಮಹಿಳೆಯರಿಗೆ ಮಾಸಿಕ ರೂ.500 ಮಾಸಾಶನ ನೀಡುವ ಈ ಯೋಜನೆಗೆ ಪಸಕ್ತ ಬಜೆಟ್ ನಲ್ಲಿ ರೂ.138 ಕೋಟಿ ಅನುದಾನವನ್ನು ನೀಡಲಾಗಿದೆ. ಸಮಾಜದ ಪ್ರತಿಯೊಂದು ದುರ್ಬಲ ವರ್ಗವನ್ನು ಗುರುತಿಸಿ, ಆ ಸಮುದಾಯವನ್ನು ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಸಲು ನಮ್ಮ ಸರ್ಕಾರವು ಬದ್ಧವಾಗಿರುವುದು.
ನಮ್ಮ ಮೆಟ್ರೋ ವಿಸ್ತರಣೆ
ಬೆಂಗಳೂರು ನಗರದ ಬೆಳವಣಿಗೆಯ ವೇಗಕ್ಕೆ ಅನುಗುಣವಾಗಿ ರಾಜ್ಯ ಸರ್ಕಾರವು 2031ರ ವೇಳೆಗೆ 317 ಕಿ.ಮೀ.ಗಳ ಮೆಟ್ರೋ ಮಾರ್ಗಗಳನ್ನು ನಿರ್ಮಿಸಲು ಸಿಎಂಪಿ ಪ್ಲಾನ್ನಲ್ಲಿ ಅನುಮೋದಿಸಿದೆ. 257 ಕಿ.ಮೀ.ಗಳ ಮಾರ್ಗವು ಕಾರ್ಯಾಚರಣೆ, ನಿರ್ಮಾಣ ಮತ್ತು ಯೋಜನೆ ಹಂತದಲ್ಲಿದ್ದು, ಇನ್ನುಳಿದ 60 ಕಿ.ಮೀ.ಗಳ ಮೆಟ್ರೊ ಮಾರ್ಗಗಳ ಕಾರ್ಯಸಾಧ್ಯತೆಯ ಸಮೀಕ್ಷೆಯನ್ನು ಶೀಘ್ರದಲ್ಲೇ ಕೈಗೊಳ್ಳಲಾಗುತ್ತದೆ. ಒಟ್ಟಾರೆ ಬೆಂಗಳೂರು ಜನತೆಗೆ ಸುಗಮ ಸಂಚಾರ ಸೌಲಭ್ಯಗಳನ್ನು ಒದಗಿಸಿಕೊಡಲಿದೆ.
ಸ್ತ್ರೀ ಉದ್ಯಮ ಶಕ್ತಿ
ಮಹಿಳೆಯರಿಗೆ ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಹಾಗೂ ಔದ್ಯೋಗಿಕ ಅವಕಾಶಗಳು ಮುಕ್ತವಾಗಿ ದೊರೆತಾಗ ಮಾತ್ರ ಆ ದೇಶ ಅಭಿವೃದ್ಧಿ ಸೂಚ್ಯಂಕದಲ್ಲಿ ಮುಂದಿರಲು ಸಾಧ್ಯ. ಸಶಕ್ತ, ಸ್ವಾವಲಂಬಿ ಮಹಿಳಾ ಸಮುದಾಯದ ಮೂಲಕ ಸದೃಢ ಸಮಾಜ ನಿರ್ಮಾಣಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಆತಿಥ್ಯ, ಆರೈಕೆ ಮತ್ತು ಪ್ರವಾಸೋದ್ಯಮದಂತಹಾ ಸೇವಾ ವಲಯದಲ್ಲಿ ಮಹಿಳಾ ಉದ್ಯಮಿಗಳ ಪಾಲ್ಗೊಳ್ಳುವಿಕೆಗೆ ಪ್ರೋತ್ಸಾಹ ನೀಡಲು ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಮೂಲಕ ಶೇ.4 ಬಡ್ಡಿದರಲ್ಲಿ ನೀಡಲಾಗುವ ಸಾಲದ ಮಿತಿಯನ್ನು ರೂ.2 ಕೋಟಿಯಿಂದ ರೂ.5 ಕೋಟಿಗೆ ಹೆಚ್ಚಿಸುವುದಾಗಿ ಬಜೆಟ್ ನಲ್ಲಿ ಘೋಷಿಸಿ, ಸಮಸಮಾಜದ ಅಡಿಪಾಯವನ್ನು ಮತ್ತಷ್ಟು ಭದ್ರಗೊಳಿಸಿದೆ.
ಶಕ್ತಿ ಯೋಜನೆ
ನಾಡಿನ ಎಲ್ಲಾ ಹೆಣ್ಣುಮಕ್ಕಳಿಗೆ ಶಕ್ತಿ ಯೋಜನೆಯಡಿ ಸರ್ಕಾರಿ ಸಾರಿಗೆ ಬಸ್ಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸಿ, ಚುನಾವಣಾ ಪೂರ್ವದಲ್ಲಿ ನಾವು ಕೊಟ್ಟ ಭರವಸೆಯನ್ನು ಈಡೇರಿಸಿದ್ದೇವೆ. ಇದರಿಂದ ಶಿಕ್ಷಣ, ಉದ್ಯೋಗ ಮುಂತಾದ ವಿಷಯಗಳಿಗೆ ಹೆಣ್ಣುಮಕ್ಕಳು ಕುಟುಂಬದ ಯಜಮಾನನ ಮೇಲೆ ಅವಲಂಬಿತರಾಗದೆ, ಸ್ವಾವಲಂಬಿಗಳಾಗಿ ನಿರ್ಣಯ ಕೈಗೊಳ್ಳಲು ಸಾಧ್ಯವಾಗಿರುವುದು ಯೋಜನೆಯ ಯಶಸ್ಸಿಗೆ ಹಿಡಿದ ಕನ್ನಡಿಯಾಗಿದೆ. ಯೋಜನೆ ಜಾರಿಗೊಂಡ ನಂತರದ 126 ದಿನಗಳ ಅವಧಿಯಲ್ಲಿ 77 ಕೋಟಿಗೂ ಅಧಿಕ ಉಚಿತ ಪ್ರಯಾಣದ ಟಿಕೆಟ್ ನೀಡಲಾಗಿದ್ದು, ಇದಕ್ಕಾಗಿ ನಮ್ಮ ಸರ್ಕಾರವೂ ರೂ. 1808 ಕೋಟಿ ಹಣವನ್ನು ವಿನಿಯೋಗಿಸಿದೆ.
ಮೀನುಗಾರ ಮಹಿಳೆಯರಿಗೆ ಉತ್ತೇಜನ
ಮೀನುಗಾರಿಕೆಯನ್ನು ನಂಬಿ ಬದುಕು ಕಟ್ಟಿಕೊಂಡ ಜನರಿಗೆ ವರ್ಷವಿಡೀ ಉದ್ಯೋಗ ಮತ್ತು ಆದಾಯವಿರದು. ಹೀಗಾಗಿ ಮಳೆಗಾಲ, ಹವಾಮಾನ ವೈಪರಿತ್ಯ ಮುಂತಾದ ಸಂದರ್ಭದಲ್ಲಿ ಉದ್ಯೋಗವಿಲ್ಲದೆ ಸಂಕಷ್ಟಕ್ಕೆ ಒಳಗಾಗುವ ಮೀನುಗಾರ ಕುಟುಂಬಗಳಿಗೆ ಇತರೆ ತಾತ್ಕಾಲಿಕ ಉದ್ಯೋಗಗಳಲ್ಲಿ ತೊಡಗಿಸಿಕೊಳ್ಳಲು ಅಥವಾ ಅವರ ಆರ್ಥಿಕ ಸ್ವಾವಲಂಬನೆ ಹಾಗೂ ವಹಿವಾಟು ವಿಸ್ತರಣೆಗೆ ನೆರವಾಗಲು ಬ್ಯಾಂಕುಗಳಲ್ಲಿ ಬಡ್ಡಿರಹಿತವಾಗಿ ನೀಡುವ ಸಾಲದ ಮಿತಿಯನ್ನು ರೂ.50,000 ದಿಂದ ರೂ.3 ಲಕ್ಷಕ್ಕೆ ಹೆಚ್ಚಿಸುವುದಾಗಿ ಬಜೆಟ್ ನಲ್ಲಿ ಘೋಷಿಸಿದ್ದು, ಈ ಸಮುದಾಯದ ಮಹಿಳೆಯರ ಹಿತ ಕಾಪಾಡಲು ನಮ್ಮ ಸರ್ಕಾರ ಬದ್ಧವಾಗಿದೆ.
ಸ್ತ್ರೀ ಶಕ್ತಿ ಸಂಘಗಳ ಸಬಲೀಕರಣ
ಕೋಟ್ಯಂತರ ಮಹಿಳೆಯರಿಗೆ ಆರ್ಥಿಕ ನೆರವು ನೀಡಿ, ಅವರ ಸ್ವಉದ್ಯೋಗದ ಕನಸನ್ನು ನನಸಾಗಿಸಿದ್ದು ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಸ್ತ್ರೀಶಕ್ತಿ ಸಂಘಗಳು. ಸ್ತ್ರೀಶಕ್ತಿ ಸಂಘಗಳಲ್ಲಿ ನೆರವು ಪಡೆದ ಮಹಿಳೆಯರು ಗುಡಿ ಕೈಗಾರಿಕೆ, ಕಸೂತಿ, ಚಿಕ್ಕಪುಟ್ಟ ವ್ಯಾಪಾರ ವಹಿವಾಟು ಸೇರಿದಂತೆ ಆದಾಯ ಬರುವ ವೃತ್ತಿಯಲ್ಲಿ ತೊಡಗಿಸಿಕೊಂಡು ಕೌಟುಂಬಿಕ ಜವಾಬ್ದಾರಿಯನ್ನು ನಿರ್ವಹಿಸುವ ಜೊತೆಜೊತೆಗೆ ದುಡಿಮೆಯ ಹಾದಿಯನ್ನು ಕಂಡುಕೊಂಡಿದ್ದಾರೆ. ರಾಜ್ಯದ ಒಟ್ಟು 1 ಲಕ್ಷದ 65 ಸಾವಿರ ಸ್ತ್ರೀ ಶಕ್ತಿ ಸಂಘಗಳಿಗೆ ರೂ. 25,000 ಆವರ್ತ ನಿಧಿ ಸೌಲಭ್ಯ ಹಾಗೂ ರೂ. 2 ಲಕ್ಷದವರೆಗೆ ಬಡ್ಡಿರಹಿತ ಸಾಲ ಸೌಲಭ್ಯ ಒದಗಿಸಿ ಮಹಿಳೆಯರ ಸ್ವಾವಲಂಬಿ ಬದುಕಿಗೆ ರಾಜ್ಯ ಸರ್ಕಾರವು ಬೆಂಬಲವಾಗಿ ನಿಂತಿದೆ.
ಗೃಹಲಕ್ಷ್ಮೀ ಯೋಜನೆ
ಕುಟುಂಬ ನಿರ್ವಹಣೆಯ ಹೊಣೆಹೊತ್ತ ಮನೆಯ ಯಜಮಾನಿಯರು ನಿತ್ಯ ಎದುರಿಸುವ ಸವಾಲುಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂಬ ಉದ್ದೇಶದಿಂದ ನಮ್ಮ ಸರ್ಕಾರವು ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ಪ್ರತಿ ಕುಟುಂಬದ ಯಜಮಾನಿಗೆ ಮಾಸಿಕ ರೂ. 2,000 ಧನಸಹಾಯ ನೀಡಲಾಗುತ್ತಿದೆ. ರಾಜ್ಯದ 1.08 ಕೋಟಿ ಮಹಿಳೆಯರಿಗೆ ಈಗಾಗಲೇ ಎರಡು ತಿಂಗಳ ಹಣ ಜಮೆಯಾಗಿದ್ದು, ಈ ಉದ್ದೇಶಕ್ಕಾಗಿ ಸರ್ಕಾರವು ರೂ. 4,449 ಕೋಟಿ ಅನುದಾನ ಬಳಕೆ ಮಾಡಿದೆ.
💵ಉದ್ಯಮ ಶಕ್ತಿ
ಸ್ತ್ರೀಯರು ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ವಲಯದಲ್ಲಿ ಪರಿಪೂರ್ಣವಾಗಿ ತೊಡಗಿಸಿಕೊಂಡಾಗ ಮಾತ್ರ ದೇಶದ ಆರ್ಥಿಕ ಅಭಿವೃದ್ಧಿಯ ವೇಗ ಹೆಚ್ಚಿರುತ್ತದೆ. ಇದಕ್ಕಾಗಿ ಸ್ತ್ರೀಯರು ಉದ್ಯಮ, ಕೈಗಾರಿಕೆ, ಸೇವಾ ವಲಯದಲ್ಲಿ ಭಾಗವಹಿಸುವುದು ಅತಿ ಮುಖ್ಯ. ಸ್ತ್ರೀ ಸ್ವಾವಲಂಬನೆಗಾಗಿ 100 ಪೆಟ್ರೋಲ್ ಬಂಕ್ಗಳನ್ನು ಸ್ಥಾಪಿಸಿ, ಅವುಗಳನ್ನು ಮಹಿಳಾ ಸಹಕಾರಿ ಸ್ವಸಹಾಯ ಸಂಘಗಳ ಮೂಲಕ ನಿರ್ವಹಣೆಗೆ ವಹಿಸಲು ಕ್ರಮ ಕೈಗೊಳ್ಳುವುದಾಗಿ ಹಾಗೂ ಪೆಟ್ರೋಲ್ ಬಂಕ್ಗಳ ಸ್ಥಾಪನೆಗೆ ಭೂಮಿ, ತರಬೇತಿ, ಪರವಾನಗಿ ಸೇರಿದಂತೆ ಅಗತ್ಯ ಬೆಂಬಲ ನೀಡುವುದಾಗಿ ಬಜೆಟ್ನಲ್ಲಿ ಹೇಳಲಾಗಿದೆ.
ಈಗೆ ಸರ್ಕಾರವು ಮಹಿಳೆಯರ ಸಬಲೀಕರಣಕ್ಕೆ ಹಲವು ಬಗೆಯ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಪ್ರಯತ್ನಿಸುತ್ತಿದೆ.
🌻ತಮ್ಮ ಸ್ನೇಹಿತರಿಗೆ ಶೇರ್ ಮಾಡಿ ಅನುಕೂಲವಾಗಲಿ